ಶ್ರೀ ಕೃಷ್ಣನ ಕಥೆಗಳು

1. ಪೃಥ್ವೀ ದೇವಿಯ ದೂರು

ಬಹಳ ವರ್ಷಗಳ ಹಿಂದೆ, ಪೃಥ್ವೀ ದೇವಿಯು (ಭೂಮಾತೆ) ರಾಕ್ಷಸರು ಹಾಗೂ ದುಷ್ಟಶಕ್ತಿಗಳ ದುಷ್ಕೃತ್ಯಗಳಿಂದ ಬಹುವಾಗಿ ನೊಂದಳು. ದೈತ್ಯರು ಎಲ್ಲೆಲ್ಲೂ ವಿನಾಶ, ಅಪಾಯ ಹಾಗೂ ಹಿಂಸೆಯನ್ನು ಸೃಷ್ಟಿಸಿದರು. ಪೃಥ್ವೀ ದೇವಿಯು ಸುಮೇರು ಪರ್ವತಕ್ಕೆ ಹೋಗಿ ತನಗೆ ಸಹಾಯ ಮಾಡು ಎಂದು ಬ್ರಹ್ಮದೇವನಲ್ಲಿ ಪ್ರಾರ್ಥಿಸಿಕೊಂಡಳು. “ಉಗ್ರಸೇನನ ಮಗನಾದ ದುಷ್ಟ ಕಂಸ ನನ್ನ ಮೇಲೆ ಭಯಭೀತಿಯನ್ನುಂಟುಮಾಡುತ್ತಿದ್ದಾನೆ. ದೈತ್ಯರಾಜ ಅರಿಷ್ಟ, ಧೇನುಕ, ಕೇಶಿ, ಪ್ರಲಂಬ, ನರಕ, ಸುಂದ ಮತ್ತು ವನ ಮೊದಲಾದವರನ್ನು ಕೂಡಿಕೊಂಡು ನನ್ನನ್ನು ನಾಶಮಾಡುತ್ತಿದ್ದಾನೆ. ದಯಮಾಡಿ ನನ್ನನ್ನು ಕಾಪಾಡು” ಎಂದು ಗೋಗರೆದಳು.

ಬ್ರಹ್ಮದೇವ ಅವಳ ಮೊರೆ ಕೇಳಿ ಮಹಾಸಾಗರದ ಉತ್ತರ ತೀರದಲ್ಲಿರುವ ವಿಷ್ಣುದೇವನನ್ನು ಪ್ರಾರ್ಥಿಸಿದ. ಭಗವಾನ್ ವಿಷ್ಣು ಅವರಿಬ್ಬರ ಮೊರೆಯನ್ನು ಆಲಿಸಿ, ಅವರ ಮುಂದೆ ಪ್ರತ್ಯಕ್ಷನಾದ. “ಓ ಪೃಥ್ವೀ, ಭಯಪಡಬೇಡ. ನಾನು ಕಂಸನನ್ನು ಕೊಲ್ಲುತ್ತೇನೆ. ನನ್ನ ಕೂದಲಿನ ಎರಡು ಎಳೆಗಳು ಕೃಷ್ಣ ಮತ್ತು ಅವನ ಅಣ್ಣ ಸಂಕರ್ಷಣ (ಬಲರಾಮ)ನಾಗಿ ಭೂಮಿಯ ಮೇಲೆ ಜನಿಸಲಿವೆ. ಅವರಿಬ್ಬರೂ ಆ ರಾಕ್ಷಸರ ರಾಜನನ್ನು ಮತ್ತು ಇತರ ದುಷ್ಟಶಕ್ತಿಗಳನ್ನು ಸಂಹರಿಸಲಿದ್ದಾರೆ” ಎಂದು ನುಡಿದ.

ಈ ಮಾತುಗಳನ್ನು ಕೇಳಿದ ಪೃಥ್ವಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಅವಳು ವಿಷ್ಣುದೇವನನ್ನು ಅನೇಕ ವಿಧದಲ್ಲಿ ಪ್ರಾರ್ಥಿಸಿ ವಂದಿಸಿದಳು.

Similar Posts

Leave a Reply

Your email address will not be published. Required fields are marked *